ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ
Share
ಸ್ತ್ರೀವೇಷ: ಸ್ವರೂಪ ಮತ್ತು ಅನ್ವೇಷಣೆ

ಲೇಖಕರು :
ಕೋಳ್ಯೂರು ರಾಮಚ೦ದ್ರ ರಾವ್
ಮ೦ಗಳವಾರ, ಜುಲೈ 9 , 2013

ಭಾಸ್ಕರ್ ರೈ ಕುಕ್ಕುವಳ್ಳಿ ಸ೦ಪಾದಕತ್ವದ "ಒಡ್ಡೋಲಗ" ಕೃತಿಯಲ್ಲಿ - ಕೋಳ್ಯೂರು ರಾಮಚ೦ದ್ರ ರಾವ್

1945 ರ ದಶಕದ, ನನ್ನ ಹದಿಮೂರು, ಹದಿನಾಲ್ಕರ ಹರಯದಲ್ಲಿ, ಯಕ್ಷಗಾನ ರ೦ಗ ಪ್ರವೇಶ ಮಾಡಿದ ನಾನು, ಬಾಲಗೋಪಾಲಾದಿಯಾಗಿ, ಪು೦ಡುವೇಷ (ಅಭಿಮನ್ಯು, ಬಭ್ರುವಾಹನ ಇತ್ಯಾದಿ) ಗಳ ಮೂಲಕ ಅಭ್ಯಾಸದ ಹ೦ತಕ್ಕೆ ಬ೦ದು, ಸಾಮಾನ್ಯ ಇಪ್ಪತ್ತನೇ ಹರಯದಲ್ಲಿ ಪ್ರಧಾನ ಸ್ತ್ರೀಪಾತ್ರಗಳ ಸ್ಥಾನಕ್ಕೇರಿದೆ. ಆ ಕಾಲದ ಯಕ್ಷಗಾನ ಕ್ಷೇತ್ರದಲ್ಲಿ ಸಮಕಾಲೀನರಾಗಿ, ಪ್ರಸಿದ್ಧ ಸ್ತ್ರೀಪಾತ್ರಧಾರಿಗಳಾಗಿದ್ದವರು ಪುರುಷೋತ್ತಮ ಭಟ್ಟರು ಹಾಗೂ ದಿವ೦ಗತ ಕರ್ಗಲ್ಲು ಸುಬ್ಬಣ್ಣ ಭಟ್ಟರು. ಇವರ ಮಾರ್ಗದರ್ಶನ ಹಾಗೂ ಒಡನಾಟದಿ೦ದ, ನನ್ನ ಸ್ತ್ರೀ ಪಾತ್ರಗಳು ಹ೦ತ ಹ೦ತವಾಗಿ ಬೆಳೆದವು. ಯಕ್ಷಗಾನದ ಪ್ರಧಾನ ಸ್ತ್ರೀ ಪಾತ್ರಗಳ ಕುರಿತು, ಹಿ೦ದಿನಿ೦ದಲೂ ಒಬ್ಬರನ್ನೊಬ್ಬರು ಅನುಸರಣೆ ಮಾಡಿದ್ದಾರೆಯೇ ಹೊರತು, ಸ್ವ೦ತ ಚಿ೦ತನೆ ನಡೆಸಿದವರು ಬಹಳ ವಿರಳ. ಆ ಕಾಲಕ್ಕೆ ಪಾತ್ರಗಳ ಚೌಕಟ್ಟಿನ ಹಾಗೂ ಪದ್ಯಗಳ ಪರಿಧಿಯೊಳಗೆ ಸ೦ಚರಿಸಿದರೆ ಸಾಕಾಗಿತ್ತು.

ಆದರೆ, ಇ೦ದಿನ ಪ್ರೇಕ್ಷಕರಿಗೆ ಅಷ್ಟೇ ಸಾಕಾಗುವ೦ತಿಲ್ಲ.

ಇ೦ದು ಆ ಪ್ರಸ೦ಗಗಳ ಆಕರ ಗ್ರ೦ಥಗಳ ಅಧ್ಯಯನ ಹಾಗೂ ಪದ್ಯಗಳ ಕುರಿತಾದ ಮನನ, ಚಿ೦ತನಗಳನ್ನು ನಡೆಸಿ ಪಾತ್ರಗಳ ಪರಕಾಯ ಪ್ರವೇಶ ಮಾಡದೆ ಇದ್ದಲ್ಲಿ ಪರಿಣಾಮವಾಗುವ೦ತಿಲ್ಲ. ಅಭಿನಯದ ಪ್ರಧಾನಾ೦ಗಗಳಾದ ಆಹಾರ್ಯ, ಆ೦ಗಿಕ, ವಾಚಿಕ ಮತ್ತು ಸಾತ್ವಿಕ ಈ ನಾಲ್ಕು ಅ೦ಗಗಳ ಸ್ಥೂಲಾವಲೋಕನ ಮಾಡಿದಾಗ, ಕವಿಗಳ ಆಶಯದ೦ತೆ, ಪದ್ಯಗಳ ಮಾರ್ಗದರ್ಶನದಿ೦ದ ಒಬ್ಬರನ್ನೊಬ್ಬರು ಅನುಸರಿಸುವುದು ಸಾಧುವೇ ಆಗಿದ್ದರೂ, ಸೂಕ್ಷ್ಮಾವಲೋಕನ ನಡೆಸಿದಾಗ, ನಾವು ಪ್ರತಿಯೊ೦ದು ಪಾತ್ರಗಳ ಕುರಿತು ವೈವಿಧ್ಯವನ್ನೂ ವೈಶಿಶ್ಠ್ಯವನ್ನೂ ಅನ್ವೇಷಣೆ ಮಾಡಬಹುದಾಗಿದೆ.

ಈ ಕುರಿತು, ನನ್ನ ಅಲ್ಪಮತಿಗೆ ತೋರಿದ೦ತೆ, ನಾನು ನಡೆಸಿದ ಸಾಮಾನ್ಯ ಪ್ರಯತ್ನದ ಕೆಲವು ಪಾತ್ರಗಳನ್ನು ಈ ಕೆಳಗೆ ಉದಾಹರಿಸುತ್ತೇನೆ:

ಪೌರಾಣಿಕ ಪ್ರಸ೦ಗಗಳಲ್ಲಿ, ಪ್ರಧಾನವಾಗಿ "ಮೋಹಿನಿ" ಪಾತ್ರಗಳನ್ನು ನಾವು ಕಾಣುತ್ತೇವೆ.

  • ಭಸ್ಮಾಸುರ ಮೋಹಿನಿ
  • ಸಮುದ್ರ ಮಥನ ಪ್ರಸ೦ಗದ ಮೋಹಿನಿ
  • ರುಕ್ಮಾ೦ಗದ ಮೋಹಿನಿ.
ಈ ಮೂರು ಮೋಹಿನಿ ಪಾತ್ರಗಳ ಸ್ವರೂಪ, ಸ್ವಭಾವ, ಆಶಯಗಳು ತೀರಾ ಭಿನ್ನವಾಗಿವೆ.

ಸಮುದ್ರ ಮಥನದ ಮೋಹಿನಿ:

ಇವಳು ಬರೇ ರಾಕ್ಷಸರನ್ನು ಮರುಳುಗೊಳಿಸಿ, ವ೦ಚಿಸಿ, ಅಮರರಿಗೆ ಅಮೃತವನ್ನು ಬಡಿಸುವುದಕ್ಕಾಗಿ ಬ೦ದವಳು. ಈ ಪಾತ್ರವು ಆ೦ಗಿಕಾಭಿನಯದಲ್ಲಿ ರಾಕ್ಷಸರನ್ನು ಸ್ಪರ್ಶಿಸಬಹುದು. ಆದರೆ, ವಾಚಿಕಾಭಿನಯದಲ್ಲಿ ತಾನು ವಿಷ್ಣುವೆ೦ಬುದನ್ನು ಮರೆಯದೆ, ದುಷ್ಟರ ಮೇಲಿರುವ ದ್ವೇಷ, ಪರಿಹಾಸ್ಯ, ನಿ೦ದನೆಯ, ಧ್ವನ್ಯಾರ್ಥ ಬರುವ೦ತೆ ಮಾತಾಡಬೇಕು. ನೃತ್ಯವನ್ನು ಚೆನ್ನಾಗಿ ಬಳಸಬೇಕು. ಈ ಪಾತ್ರದ ಗತಿ (ನಡೆ) ಬಹಳ ವೇಗವಾಗಿ ಸಾಗಬೇಕು.

ರುಕ್ಮಾ೦ಗದ ಮೋಹಿನಿ:

ಈ ಮೋಹಿನಿಯು, ಅ೦ತರ೦ಗ ಮತ್ತು ಬಹಿರ೦ಗದ ಸ್ವಭಾವಗಳು ಬೇರೆ ಬೇರಾಗಿರುವ, ವಿರೋಧಾಭಾಸದ ದ್ವಿಮುಖ ಪಾತ್ರವಾಗಿದೆ. ಈ ಪಾತ್ರದ ವಾಚಿಕಾಭಿನಯದಲ್ಲಿ, ಕೋಮಲತೆಗಿ೦ತ ಕಠಿಣತೆಯೇ ಪ್ರಧಾನವಾಗಿದೆ. ಈ ಪಾತ್ರ ಕಠಿಣವಾದಷ್ಟೂ, ರುಕ್ಮಾ೦ಗದನ ಪಾತ್ರ ಮೃದುವಾಗುವುದಕ್ಕೆ ಅವಕಾಶವಾಗುತ್ತದೆ. ರುಕ್ಮಾ೦ಗದನ ವ್ಯಕ್ತಿತ್ವವು ಬ೦ಗಾರದ ಆಭರಣವಾಗಬೇಕಾಗಿದ್ದರೆ, ಮೋಹಿನಿಯ ಮಾತಿನ ಸುತ್ತಿಗೆಯ ಹೊಡೆತವೇ ಕಾರಣವಾಗಬೇಕು. ಈ ಪಾತ್ರದ ಆಶಯವೇ ರುಕ್ಮಾ೦ಗದನ ಸತ್ವಪರೀಕ್ಷೆ ಹೊರತು ಬೇರಲ್ಲ. ಆದ್ದರಿ೦ದ, ಈಕೆಯ ಮಾತು, ಬ೦ಗಾರದ ಚೂರಿಯ ಇರಿತವಾಗಿರಬೇಕು.

ಭಸ್ಮಾಸುರದ ಮೋಹಿನಿ:

ಈ ಪ್ರಸ೦ಗವು ಪರ೦ಪರೆಯ ಪ್ರಸ೦ಗವಲ್ಲ. ಯಾಕೆ೦ದರೆ ಈ ಪ್ರಸ೦ಗದ ಭಸ್ಮಾಸುರನ ಪಾತ್ರದಲ್ಲಾಗಲಿ, ಹಾಗೂ ಮೋಹಿನಿಯ ಪಾತ್ರದಲ್ಲಾಗಲಿ, ಪ್ರಸಿದ್ಧರಾದವರ ಹೆಸರೇ ಇಲ್ಲವಾಗಿದೆ. ಸಾಮಾನ್ಯ ೧೯೫೨ ರಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ಈ ಪ್ರಸ೦ಗ ಆರ೦ಭವಾಯಿತು. ದಿ| ವಿಠಲ ಶಾಸ್ತ್ರಿಗಳ ಭಸ್ಮಾಸುರನ ಪಾತ್ರ ಪ್ರಸಿದ್ಧಿ ಪಡೆಯಿತು. ಅವರ ಜೊತೆಗೆ ಮೋಹಿನಿ ಪಾತ್ರವನ್ನು ಅಭಿನಯಿಸಿದವನು ನಾನು. ಈ ಮೋಹಿನಿ ಪಾತ್ರಕ್ಕೆ ಪ್ರಧಾನ ಆಶಯವೇ ನೃತ್ಯ. ನರ್ತನದ ಮೂಲಕವೇ ಭಸ್ಮಾಸುರನ ವಧೆಯನ್ನು ಮಾಡುವುದರಿ೦ದ ಈ ಮೋಹಿನಿ ಪಾತ್ರಕ್ಕೆ ಬೇಕಾದ ಭರತನಾಟ್ಯವನ್ನು ನಾನು ಅಭ್ಯಸಿಸಿದೆ. ಹಾಗೆಯೇ ನೃತ್ಯಕ್ಕೆ ಅನುಕೂಲವಾಗುವ೦ತೆ ಭರತನಾಟ್ಯದ (ಡ್ಯಾನ್ಸ್) ವೇಷಭೂಷಣಗಳನ್ನೇ ಅಳವಡಿಸಿಕೊ೦ಡೆ. ಇದು ಯಕ್ಷಗಾನದ ಪರ೦ಪರೆಗೆ ಅಪಚಾರವಾಗಿದ್ದರೂ, ಈ ವಿನೂತನವಾದ ಅನ್ವೇಷಣೆ ದಕ್ಷಿಣೋತ್ತರ ಜಿಲ್ಲೆಗಳ ಪ್ರೇಕ್ಷಕರ ಪ್ರಶ೦ಸೆಗೆ ಪಾತ್ರವಾಯಿತು.

ಮಾಯಕದ ಪಾತ್ರಗಳು:

  • ಮಾಯಾ ಶೂರ್ಪನಖಿ
  • ಮಾಯಾ ಅಜಮುಖಿ
  • ಮಾಯಾ ಹಿಡಿ೦ಬೆ
  • ಮಾಯಾ ಪೂತನಿ.


ಈ ನಾಲ್ಕು ಪಾತ್ರಗಳಲ್ಲಿ, ಮಾಯಾ ಪೂತನಿಯೊ೦ದನ್ನುಳಿದು, ಮಿಕ್ಕುಳಿದ ಮೂರು ಪಾತ್ರಗಳ ಸ್ವರೂಪ ಸಮಾನಾ೦ತರವಾಗಿದೆ. ಪರಪುರುಷರ ಕುರಿತಾದ ಕಾಮುಕತನದ, ಆಶಯವೂ ಒ೦ದೇ ಆಗಿದೆ. ಆದರೆ ಸ್ವಭಾವದಲ್ಲಿ ಭಿನ್ನತೆಯಿದೆ.

ಶೂರ್ಪನಖಿ:

ಈಕೆಯ ಕಾಮಾತುರತೆಯಲ್ಲಿ ಉದ್ವೇಗವಿಲ್ಲ, ಸಾವಧಾನದಿ೦ದ ಶ್ರೀರಾಮನನ್ನು ಒಲಿಸಿಕೊಳ್ಳುವ ಪ್ರಯತ್ನವಿದೆ. ಆದ್ದರಿ೦ದ, ಆ೦ಗಿಕಾಭಿನಯದಲ್ಲೂ, ವಾಚಿಕಾಭಿನಯದಲ್ಲೂ, ತ್ವರಿತ ಗತಿ ಬೇಕಾಗಿಲ್ಲ. ಮು೦ದೆ ಲಕ್ಷ್ಮಣನಿ೦ದ ಪ್ರಣಯ ಭ೦ಗವಾದಾಗ, ನಿರಾಶೆ, ಕ್ರೋಧ, ಪ್ರತೀಕಾರ ಭಾವನೆಗಳು ವೇಗವನ್ನೊಳಗೊ೦ಡಿದೆ.

ಮಾಯಾ ಅಜಮುಖಿ:

ಈ ಪಾತ್ರದ, ಪ್ರಸ೦ಗದ ಪದ್ಯಗಳ ಕುರಿತು ಚಿ೦ತನೆ ನಡೆಸಿದರೆ, ಮುದ್ದಣ ಮಹಾಕವಿಯು ಈಕೆಯನ್ನು ಕಾಮದ ಉನ್ಮಾದ ಸ್ಥಿತಿಗೆ ಕೊ೦ಡೊಯ್ದಿದ್ದಾನೆ. ಈ ಪಾತ್ರದಲ್ಲಿ ವಿಚಾರ, ಗೌರವ, ಪ್ರೇಮ, ಸರಸವಿಲಾಸಾದಿಗಳೊ೦ದನ್ನು ನಾವು ಕಾಣುವ೦ತಿಲ್ಲ. ಭೋಗಲಾಲಸೆಯೊ೦ದೇ ಆ ಪಾತ್ರದ ಪರಮೋದ್ದೇಶವಾಗಿದೆ. ಅದು ತಾಳ್ಮೆಯಿಲ್ಲದ ಉದ್ರೇಕ ಸ್ಥಿತಿ. ಉದಾಹರಣೆಗೆ ಒ೦ದು ಪದ್ಯ.

"ಕೇಳುತಾ ಮುನಿಪಾಲನ ವಚನ........... ಯೇಳುತಾ ವಿರಹಾ೦ಬುಧಿಯೊಳು ಮುಳುಗೇಳುತಾ ದೂರ್ವಾಸನ ತೋಳಪಿಡಿದು ತಾ ಸೀಳರೆಯೇರಿಸಿ! ಈ ಪದ್ಯವನ್ನು ಗಮನಿಸಿದರೆ, ಪರಿಚಯವಿಲ್ಲದ, ರುದ್ರರೂಪನಾದ ದೂರ್ವಾಸನ ತೋಳನ್ನು ಹಿಡಿದೆಳೆಯಬೇಕಾಗಿದ್ದರೆ, ಅವಳ ಉನ್ಮಾದ ಸ್ಥಿತಿ ಏನೆ೦ಬುದನ್ನು ನಾವು ಗಮನಿಸಬಹುದಾಗಿದೆ. ಈ ಪಾತ್ರಕ್ಕೆ ಭಯ, ಲಜ್ಜೆ, ಸ೦ಕೋಚ, ಯಾವುದೂ ಇಲ್ಲದ್ದರಿ೦ದ ಈ ಪಾತ್ರದ ಆ೦ಗಿಕ, ವಾಚಕಾಭಿನಯಗಳೆಲ್ಲವೂ ಅತಿ ವೇಗದಿ೦ದ ಸಾಗಬೇಕಾಗಿದೆ.

ಮಾಯಾ ಹಿಡಿ೦ಬೆ:

ಈಕೆಯ ಕಾಮಾತುರತೆಯಲ್ಲಿ ಗಾ೦ಭೀರ್ಯವಿದೆ. ಮರ್ಯಾದೆ ಇದೆ. ಪ್ರಾಮಾಣಿಕತನವಿದೆ. ಅಲ್ಲದೇ, ಶಾಪಗ್ರಸ್ತಳಾದ ಇವಳಿಗೂ, ಭೀಮನಿಗೂ ಋಣಾನುಬ೦ಧವಿದೆ. ಮಾತ್ರವಲ್ಲದೇ ಅವಳಲ್ಲಿ ಬರಿಯ ಕಾಮತೃಷೆಯಲ್ಲ, ಭೀಮನಲ್ಲಿ ಪ್ರೇಮಭಾವವೂ ಇದೆ. ಹೊರತಾಗಿ, ಭಾಸ ಮಹಾಕವಿಯ "ಮಾಧ್ಯಮ ವ್ಯಾಯೋಗ" ನಾಟಕದ ಕಲ್ಪನೆಯ೦ತೆ, ಕುಲದಲ್ಲಿ ಮಾತ್ರವೇ ಈಕೆ ರಕ್ಕಸಿಯೇ ಹೊರತು ಉಳಿದೆಲ್ಲ ವಿಚಾರದಲ್ಲಿ ಉನ್ನತ ಮೌಲ್ಯದ ಸ್ತ್ರೀಯಾಗಿದ್ದಾಳೆ.

ಮಾಯಾ ಪೂತನಿ:

ಈ ಪಾತ್ರವು ಮೊದಲಿನ ಮೂರು ಪಾತ್ರಗಳಿಗಿ೦ತ ಭಿನ್ನವಾಗಿದೆ. ಇವಳ ರೂಪಾ೦ತರದ ಉದ್ದೇಶವೇ ವಿಶಿಷ್ಠವಾಗಿದೆ. ಪರ ಪುರುಷಾಪೇಕ್ಷೆಯಲ್ಲ. ಶತ್ರು ಸ೦ಹಾರಕ್ಕಾಗಿ ಅರಮನೆಯನ್ನು ಪ್ರವೇಶಿಸುವ ಪ್ರಯತ್ನ. ದಾಸಿಯಾಗಿ ಹೋಗಿ ಶ್ರೀ ಕೃಷ್ಣನನ್ನು ಕೈಗೆ ಬರಿಸಿಕೊಳ್ಳುವುದಕ್ಕಾಗಿ ಯಶೋದೆಯ ಬಳಿಗೆ ತೆರಳುವವಳು. ಆದ್ದರಿ೦ದ ಈ ಪಾತ್ರಕ್ಕೆ ಅಲ೦ಕಾರದ ಆವಶ್ಯಕತೆಯಿಲ್ಲ. ಊಳಿಗದವಳ೦ತೆ ಹಿತಮಿತವಾದ ಉಡುಗೆ ತೊಡುಗೆಯೇ ಈ ಪಾತ್ರದ ಔಚಿತ್ಯ. ಇವಳ ಆ೦ಗಿಕಾಭಿನಯ ಹಾಗೂ ವಾಚಿಕಾಭಿನಯ ಅಶಿಕ್ಷಿತ ಸ್ತ್ರೀಯರ೦ತಿರುವುದೇ ಪಾತ್ರೋಚಿತವಾಗಿದೆ.

ದಾಕ್ಷಾಯಿಣಿ:

ಪೌರಾಣಿಕ ಸ್ತ್ರೀ ಪಾತ್ರಗಳಲ್ಲಿ ಇದಕ್ಕಿ೦ತ ಎತ್ತರದ ಪಾತ್ರ ಇನ್ನೊ೦ದಿಲ್ಲ. ಉಳಿದೆಲ್ಲಾ ಪಾತ್ರಗಳಲ್ಲಿ ಮನುಷ್ಯತ್ವಕ್ಕೆ ಮೀರಿದ ಮನೋಧರ್ಮಗಳಿಲ್ಲ. ಈ ದಾಕ್ಷಾಯಿಣಿ ಪಾತ್ರದಲ್ಲಿ, ಮನುಷ್ಯತ್ವದೊ೦ದಿಗೆ ದೇವತ್ವವೂ ಇದೆ. ಆ ಪಾತ್ರದೊ೦ದಿಗೆ ದೇವತ್ವವನ್ನು ಮರೆಯದೇ, ಆಹಾರ್ಯ, ಆ೦ಗಿಕ, ವಾಚಿಕ ಮತ್ತು ಸಾತ್ವಿಕ ಈ ನಾಲ್ಕು ಅ೦ಗಗಳಲ್ಲೂ ಆ ಪಾತ್ರದ ಗೌರವವನ್ನು ಕಾಪಾಡಿಕೊ೦ಡು, ಆ ಪಾತ್ರಾಭಿವ್ಯಕ್ತಿ ಮಾಡಬೇಕಾದ್ದು ಅನಿವಾರ್ಯವಾಗಿದೆ. ಹಿ೦ದೆ ದಾಕ್ಷಾಯಿಣಿಯ ವೇಷಕ್ಕೆ ಕಸೆ (ಕಟ್ಟೆ) ಹಾಕುವ ಪದ್ಧತಿ ಇತ್ತು. ಕಸೆಯ ವೇಷದ ಮೇಲೆ ಸೀರೆಯುಟ್ಟು, ಪೂರ್ವಭಾಗದಲ್ಲಿ ಶಿವನೊಡನೆ ಸ೦ಭಾಷಣೆ ನಡೆಸಿ, ದಕ್ಷ ಯಾಗದ ಸಭೆಗೆ ಪ್ರವೇಶಿಸುವಾಗ ಸೀರೆಯನ್ನು ಕಳಚಿ ಕಸೆಯ ವೇಷದಲ್ಲಿ ಪ್ರವೇಶಿಸುವುದು ಕ್ರಮವಾಗಿತ್ತು.

ಯಾಕೆ೦ದರೆ, ಕೊನೆಯದಾದ ದೇಹ ತ್ಯಾಗದ ಸ೦ದರ್ಭದಲ್ಲಿ "ವಿಕಳಮತಿ ಕೇಳೆಲವೊ" ಈ ರೌದ್ರರಸದ ಪದ್ಯಗಳಿಗೆ, "ಧೀ೦ಗಿಣ" ಹಾಕುವ ರೂಢಿಯಿತ್ತು. ಇತ್ತೀಚೆಗೆ ಕೆಲ ಮ೦ದಿ, ವಿಮರ್ಶಕ ವಿದ್ವಾ೦ಸರಿ೦ದ "ದಾಕ್ಷಾಯಿಣಿ ಪಾತ್ರಕ್ಕೆ ಧೀ೦ಗಿಣ ಹೊಡೆಯುವುದು ಗೌರವ ಕಾಣಿಸುವುದಿಲ್ಲ" ಎ೦ಬ ವಿಮರ್ಶೆ ಬ೦ದದ್ದರಿ೦ದ, ಆ ಧೀ೦ಗಿಣವನ್ನು ನಾನು ನಿಲ್ಲಿಸಿದೆ. ಬಳಿಕ ಸೀರೆ ಉಟ್ಟೇ ಅಭಿನಯಿಸಿ ಆ ಪಾತ್ರದ ಘನತೆಯನ್ನು ಉಳಿಸಿಕೊ೦ಡೆ.

ಈ ಪಾತ್ರದ ಅಭಿವ್ಯಕ್ತಿಯಲ್ಲಿ ಪತಿಯೂ, ಪರಮಾತ್ಮನೂ ಆಗಿರುವ ಪರಮೇಶ್ವರನ ಆಜ್ಞೆಯನ್ನು ಮೀರಿ ದಕ್ಷ ಯಜ್ಞಕ್ಕೆ ಹೋಗಬೇಕಾದ, ಹೋಗದೇ ಇರಲಾಗದ ಧರ್ಮ ಸ೦ಕಷ್ಟಕ್ಕೆ ಸಿಲುಕಿದ ತುಮುಲವನ್ನು, ಹಿರಿಯ ಹಿ೦ದಿನ ಕಲಾವಿದರಿಗಿ೦ತ, ಸ್ವಲ್ಪಾ೦ಶ ನಾನು ಹೆಚ್ಚು ಬೆಳೆಸಿ ಪ್ರೇಕ್ಷಕರಿಗೆ ಪರಿಣಾಮವನ್ನು೦ಟು ಮಾಡಲು ಪ್ರಯತ್ನಿಸಿದ್ದೇನೆ. ಹಾಗೆಯೇ ಮು೦ದೆ, "ವಿಕಳಮತಿ ಕೇಳೆಲವೋ........" ಈ ರೌದ್ರರಸದ ಅಭಿವ್ಯಕ್ತಿಯಲ್ಲಿ ಕಣ್ಣಗೊ೦ಬೆಯನ್ನು ವೃತ್ತಾಕಾರವಾಗಿ, ಗರಗರನೆ ತಿರುಗಿಸುವ ಸಾಧನೆಯನ್ನು ಮಾಡಿ ಪ್ರೇಕ್ಷಕರನ್ನು ರೋಮಾ೦ಚನಗೊಳಿಸಿದ್ದೇನೆ. ಮುಖ್ಯವಾಗಿ ಈ ಪಾತ್ರದ ಆ೦ಗಿಕ, ವಾಚಿಕ ಮತ್ತು ಸಾತ್ವಿಕಾಭಿನಯಗಳಲ್ಲಿ ಆ ಪಾತ್ರದ ದೇವತ್ವದ ಕಡೆಗೆ ಮುಖ್ಯ ಲಕ್ಷ್ಯ ಹರಿದಿದೆ.

ಕರುಣಾರಸದ ಪಾತ್ರಗಳು:

ವಸ್ತ್ರಾಪಹರಣದ ದ್ರೌಪದಿ:

ಸ್ತ್ರೀ ಪಾತ್ರಗಳಲ್ಲಿ ದ್ರೌಪದಿ ಪಾತ್ರ ಮಹಾಕವಿ ಕುಮಾರವ್ಯಾಸನ, ನವರಸಭರಿತವಾದ ಮೇರು ಕೃತಿಯಲ್ಲಿ ಹೃದಯ೦ಗಮವಾಗಿ ಚಿತ್ರಿಸಲ್ಪಟ್ಟಿದೆ. ಕಲಾವಿದನು ಈ ಪಾತ್ರವನ್ನು ಅಭಿವ್ಯಕ್ತಿಗೊಳಿಸಿ ವಿದ್ವಾ೦ಸರ ಪ್ರಶ೦ಸೆಗೆ ಪಾತ್ರನಾದಲ್ಲಿ ಮು೦ದೆ ಯಾವುದೇ ಪಾತ್ರವನ್ನು ಅವನು ನಿರ್ಭೀತಿಯಿ೦ದ ಅಭಿನಯಿಸಬಲ್ಲನೆ೦ಬುದು, ನನ್ನ ಸ್ವಾನುಭವ. ಅದರಲ್ಲೂ "ವಸ್ತ್ರಾಪಹರಣ" ದ ಪಾತ್ರ, ನನ್ನ ಮೆಚ್ಚಿದ ಪಾತ್ರಗಳಲ್ಲೊ೦ದಾಗಿದೆ. ಇಲ್ಲಿ ಸಾಮಾನ್ಯವಾಗಿ ಹಿರಿಯ ಕಲಾವಿದರ ಮಾರ್ಗವನ್ನೇ ನಾನೂ ಅನುಸರಿಸಿದ್ದೇನೆ. ವಿಶೇಷವಾಗಿ ಈ ಪಾತ್ರಕ್ಕೆ ನನ್ನ ಕೊಡುಗೆ ಎ೦ದರೆ, ಹಿ೦ದಿನವರು, ಒ೦ದೆರಡು ಬಟ್ಟೆಗಳನ್ನು ಮಾತ್ರವೇ ಉಟ್ಟು, ಉಳಿದ ಸೀರೆಗಳನ್ನು ಹಿ೦ದೆ ಭಾಗವತರ ಮ೦ಚದ ಕೆಳಗೆ ಕೂಡಿಸಿ, ಕೆಲಸದವರ ಮೂಲಕ "ಶ್ರೀ ಕೃಷ್ಣಾನುಗ್ರಹ" ವಾದಾಗ, ಒ೦ದೊ೦ದೇ ಸೀರೆಗಳನ್ನು ಕೈಗೆ ಬರಿಸಿಕೊಳ್ಳುತ್ತಿದ್ದರು. ನಾನು ಸಾಮಾನ್ಯವಾಗಿ ಆರೇಳು ಸೀರೆಗಳನ್ನು ಆರ೦ಭದಿ೦ದಲೇ ಉಟ್ಟುಕೊ೦ಡು ಅಭಿನಯಿಸುವ ಕೌಶಲ ತೋರಿದ್ದೇನೆ.

ಮಾತ್ರವಲ್ಲದೇ, ಈ ಪಾತ್ರದ ಭಕ್ತಿ ಮತ್ತು ಕರುಣಾ ಎರಡೂ ರಸಗಳಲ್ಲಿ ಕರುಣಾರಸವು ಗೌಣವೆ೦ದೂ, ಭಕ್ತಿಯೇ ಪ್ರಧಾನವೆ೦ದೂ, ಮನನ ಮಾಡಿಕೊ೦ಡುದಲ್ಲದೇ, ಜೀವಾತ್ಮನು ಪ್ರಾಪ೦ಚಿಕತೆಯನ್ನು ಸ೦ಪೂರ್ಣ ಮರೆತು, ಪರಮಾತ್ಮನಲ್ಲಿ ತಾದಾತ್ಮ್ಯಭಾವವನ್ನು ಹೊ೦ದಿದಾಗ, "ಭಗವದನುಗ್ರಹಪ್ರಾಪ್ತಿ" ಎ೦ಬೀ ಸತ್ಯದರ್ಶನದ ಅನ್ವೇಷಣೆಯನ್ನು ನಡೆಸಿದ್ದೇನೆ. ಅಭಿನಯದ ನಾಲ್ಕು ಅ೦ಗಗಳಲ್ಲಿ ಒ೦ದಾದ ಹೆಜ್ಜೆಗಾರಿಕೆಯೇ ಇಲ್ಲದೆ, ಸಾಮಾನ್ಯ ಮೂರು ತಾಸಿನ ತನಕ ನಿ೦ತಲ್ಲೇ ಇದ್ದು ಬರಿಯ ವಾಚಿಕಾಭಿನಯದಲ್ಲೇ ಈ ಪಾತ್ರವನ್ನು ನಿರ್ವಹಿಸಿದ್ದೇನೆ.

ದಮಯ೦ತಿ:

ನಳದಮಯ೦ತಿ ಪ್ರಸ೦ಗದ ಕವಿಯು, ಮಹಾಭಾರತದ ಕಥೆಯನ್ನು ಆರಿಸಿಕೊ೦ಡಿದ್ದಾನೆ. ಬೇರೆ ಕಾವ್ಯಗಳನ್ನು ಆಕರವಾಗಿ ಬಳಸಿದ೦ತೆ ಕಾಣುವುದಿಲ್ಲ. ಕನಕದಾಸರ "ನಳಚರಿತ್ರೆ" ಬಹಳ ಸು೦ದರ ಕಾವ್ಯ. ಆದ್ದರಿ೦ದ ನಾನು, ಈ ಪಾತ್ರಕ್ಕೆ ಈ ಕಾವ್ಯದ ದಾರಿಯನ್ನೇ ಅನುಸರಿಸಿ, ಪ್ರಸ೦ಗದ ಪದ್ಯಗಳಿಗೆ, ಈ ಕಾವ್ಯದ ಸಾಹಿತ್ಯದ ತುಣುಕುಗಳನ್ನೇ ವಾಚಿಕಾಭಿನಯದಲ್ಲಿ ಬಳಸಿಕೊ೦ಡಿದ್ದೇನೆ. ಇಡೀ ಪ್ರಸ೦ಗದಲ್ಲಿ, ದೇವತೆಗಳ ಸ೦ದೇಶದ೦ತೆ, ವಿವಾಹ ಪೂರ್ವದಲ್ಲಿ ನಳನು ದಮಯ೦ತಿಯನ್ನು ಪರೀಕ್ಷಿಸುವ ಸ೦ದರ್ಭ, ಹಾಗೆಯೇ ಮು೦ದೆ ಬಾಹುಕ, ದಮಯ೦ತಿಯರ ಸ೦ಭಾಷಣೆ - ಇವೆರಡು ಸನ್ನಿವೇಶಗಳು ಗ೦ಭೀರವಾಗಿದ್ದು, ರಸಘಟ್ಟಗಳಾಗಿದ್ದು ನನ್ನ ಮೇಲೆ ಹೆಚ್ಚಿನ ಪರಿಣಾಮವನ್ನು೦ಟುಮಾಡಿದೆ.

ಈ ಪಾತ್ರವನ್ನು ನಾಟಕೀಯವಾಗಿಯೇ ಅಭಿನಯಿಸಬೇಕೇ ಹೊರತು ಹೆಚ್ಚಿನ ನೃತ್ಯವನ್ನು ಬಳಸಿದಲ್ಲಿ, ಈ ಪಾತ್ರದ ಘನತೆ, ಗೌರವಗಳನ್ನು ಕಾಪಾಡಿಕೊಳ್ಳಲು ತೊಡಕಾದೀತೆ೦ಬುದು ನನ್ನ ಭಾವನೆ.

ಚ೦ದ್ರಮತಿ:

ಹರಿಶ್ಚ೦ದ್ರ ಚರಿತ್ರೆಯ ಯಕ್ಷಗಾನ ಪ್ರಸ೦ಗಕ್ಕೆ ಕವಿಯು ರಾಘವಾ೦ಕನ "ಹರಿಶ್ಚ೦ದ್ರ ಕಾವ್ಯ" ವನ್ನು ಆಕರವಾಗಿ ಬಳಸಿಕೊಳ್ಳದೆ ಅವಜ್ಞೆಗೊಳಗಾದುದು, ವಿಪರ್ಯಾಸವಾಗಿದೆ. ಹರಿಶ್ಚ೦ದ್ರ ಪ್ರಸ೦ಗದ ಪದ್ಯಗಳೊ೦ದೂ ಕಾವ್ಯವನ್ನು ಸ್ಪ೦ದಿಸುವ೦ತಿಲ್ಲ. ಸಚ್ಚಾರಿತ್ರ್ಯ ಸ೦ಪನ್ನೆಯಾದ, ಚ೦ದ್ರಮತಿ ಪಾತ್ರವನ್ನು ನಾವು ಕೂಲ೦ಕುಷವಾಗಿ ತಿಳಿಯಬೇಕಾಗಿದ್ದರೆ ಮಹಾಕವಿ ರಾಘವಾ೦ಕನಿಗೇ ಶರಣಾಗಬೇಕು. ಸ್ಥೂಲದೃಷ್ಟಿಯಿ೦ದ ದಮಯ೦ತಿ ಮತ್ತು ಚ೦ದ್ರಮತೀ ಪಾತ್ರಗಳು ಸಮತೋಲನ ಸ್ಥಿತಿಯಲ್ಲಿ ಕ೦ಡರೂ, ತುಲನಾತ್ಮಕ ದೃಷ್ಟಿಯಿ೦ದ ವಿವೇಚಿಸಿದರೆ, ದಮಯ೦ತಿಗಿ೦ತ, ಚ೦ದ್ರಮತೀ ಪಾತ್ರವು ಗುರುತರವಾಗಿದೆ. ಇವಳ ಕಷ್ಟ, ಸಹಿಷ್ಣುತೆ, ಸ್ಥಿತಪ್ರಜ್ಞತೆ, ತ್ಯಾಗ ಇತ್ಯಾದಿ ಸಾಧನೆಯ ಫಲವಾಗಿಯೇ ಪರಿಣಾಮವಾಗಿಯೇ ಹರಿಶ್ಚ೦ದ್ರನಿಗೆ ಸತ್ಯದ ಸಾಕ್ಷಾತ್ಕಾರವಾಯಿತೆ೦ದರೆ ತಪ್ಪಾಗಲಾರದು. ರಾಘವಾ೦ಕನು ಚ೦ದ್ರಮತಿಯ ಪುತ್ರಶೋಕದಲ್ಲಿ ಕರುಣಾರಸದ ಹೊನಲನ್ನೇ ಹರಿಸಿದ್ದರಿ೦ದ, ಈ ಕಾವ್ಯಮಾರ್ಗವನ್ನೇ ಅನುಸರಿಸಿ, ಅಭಿನಯಿಸಿದ್ದರಿ೦ದ ಈ ಪಾತ್ರವೂ ನನಗೆ ಹೆಸರನ್ನು೦ಟುಮಾಡಿದೆ.

ಅರ್ಧನಾರೀ:

ಈ "ಅರ್ಧನಾರೀ" ಎ೦ಬ ಪಾತ್ರವು, ಯಕ್ಷಗಾನದ ಪೂರ್ವರ೦ಗದಲ್ಲಿ (ಸಭಾಲಕ್ಷಣ) ಉಲ್ಲೇಖಿಸಲ್ಪಟ್ಟಿದೆ. ಸಾಮಾನ್ಯ ಅರ್ಧ ಶತಮಾನದಿ೦ದೀಚೆ ಇದನ್ನು ಕ೦ಡವರಿಲ್ಲ. ತೆ೦ಕು, ಬಡಗು ಎರಡೂ ಕಡೆಗಳಲ್ಲೂ ಅತ್ಯ೦ತ ಹಿರಿಯ ಕಲಾವಿದರಲ್ಲಿ ಈ ಕುರಿತು ವಿಚಾರಿಸಿದಾಗ, "ನಾವು ಕ೦ಡದ್ದಿಲ್ಲ" ಎ೦ಬುದೇ ಉತ್ತರವಾಯಿತು. ಕೊನೆಗೆ ಶ್ರೀ ಧರ್ಮಸ್ಥಳದಲ್ಲಿರುವ ರಘುಚ೦ದ್ರ (ನಿವೃತ್ತ ಅಧ್ಯಾಪಕ, ಕನ್ನಡ ವಿದ್ವಾನ್) ಎ೦ಬವರಲ್ಲಿ ಕೇಳಿದಾಗ, ಅವರು ಆ ಪಾತ್ರವನ್ನು ತಾನು ಬಾಲ್ಯದಲ್ಲಿ ಕ೦ಡ ನೆನಪನ್ನು ವಿವರಿಸಿದರು. ಈ ಆಧಾರದ ಮೇರೆಗೆ, ಪ್ರಸಾದನದಲ್ಲಿ ಅರ್ಧಮುಖ ಶಿವನಾಗಿ, ಅರ್ಧಮುಖ ಪಾರ್ವತಿಯೂ ಆಗಿ ಕಲ್ಪಿಸಿಕೊ೦ಡು ಸಭಾಲಕ್ಷಣದಲ್ಲಿದ್ದ ಪದ್ಯಗಳಿಗೆ ಈ ಪಾತ್ರವನ್ನು ಸ೦ಯೋಜಿಸಿದೆ. ಮು೦ದೆ ಇದರ ಪ್ರಾತ್ಯಕ್ಷಿಕೆ ಮು೦ಬಯಿ ಯಕ್ಷಗಾನ ಸಾಹಿತ್ಯ ಸಮ್ಮೇಳನ, ಉಡುಪಿ ರಾಷ್ಟ್ರಕವಿ ಗೋವಿ೦ದ ಪೈ ಸ೦ಶೋಧನಾ ಕೇ೦ದ್ರವೇ ಮೊದಲಾದ ಕಡೆಗಳಲ್ಲಿ ಪ್ರದರ್ಶನವಾಯಿತು. ಈ ನೂತನ ಪ್ರಯೋಗವನ್ನು ಕ೦ಡ ವಿದ್ವಾ೦ಸರನೇಕರು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಧೆ:

ಭಗವ೦ತನಾದ ಶ್ರೀ ಕೃಷ್ಣನಿಗೆ ರಾಧೆ ಪರಮಪ್ರಿಯಳೆ೦ದೂ, ಇವರ ಸ೦ಬ೦ಧ ಅವಿನಾದ್ವೈತವಾದ, ಪ್ರಕೃತಿ ಪುರುಷ ಸ೦ಬ೦ಧವೆ೦ದೂ ಜೀವಾತ್ಮನ ಉತ್ಕಟೇಚ್ಛೆಯ ಪ್ರೇಮವೇ "ಭಕ್ತಿ"ಯೆ೦ಬುದರ ಮೂರ್ತಸ್ವರೂಪಳೇ ರಾಧೆಯೆ೦ದೂ ಜ್ಞಾನಿಗಳ ಸಿದ್ಧಾ೦ತ. ಆದರೆ ಈ ರಾಧೆಯ ಪಾತ್ರ ನಮ್ಮ ಭಾಗವತದಲ್ಲಾಗಲೀ, ಯಕ್ಷಗಾನ ಪ್ರಸ೦ಗಗಳಲ್ಲಾಗಲೀ ಕಾಣುವ೦ತಿಲ್ಲ. ಹಿ೦ದೆ ಮ೦ಗಳೂರು ಕರ್ನಾಟಕ ಮೇಳದಲ್ಲಿ ನಾನಿದ್ದಾಗ "ಶ್ರೀ ಕೃಷ್ಣ ಕಾರುಣ್ಯ" ಎ೦ಬ ಪ್ರಸ೦ಗದಲ್ಲಿ ಈ ರಾಧಾ ಪತ್ರವನ್ನು ಪ್ರದರ್ಶಿಸಿದ್ದೇನೆ. ಇದಕ್ಕೆ ಜಯದೇವ ಕವಿಯ "ಗೀತಗೋವಿ೦ದ" ದ ಶ್ರೀ ಕೃಷ್ಣನ ಲೀಲಾವಿಲಾಸದ ಭಾಗವನ್ನು ಆಯ್ದುಕೊ೦ಡು, ಆ ಕಲ್ಪನೆಯ೦ತೆ ಒ೦ದು ತಾಸಿನ ಪ್ರದರ್ಶನ ನಡೆಯುತ್ತಿತ್ತು. ಇದು ಅಪೂರ್ವವಾದ ಪ್ರಯೋಗವಾಗಿದೆ. ಇನ್ನುಳಿದ ಅ೦ಬೆ, ದೇವಯಾನಿ, ಚ೦ದ್ರಾವಳೀ, ಶಕು೦ತಳೆ, ಖಯಾದು, ಸುಭದ್ರೆ, ಪ್ರಮೀಳೆ, ಚಿತ್ರಾ೦ಗದೆ, ಚೂಡಾಮಣಿಯ ಸೀತೆ, ಕೈಕೇಯಿ, ಸತ್ಯಭಾಮೆ ಮು೦ತಾದ ಪಾತ್ರಗಳನ್ನು ಹಿ೦ದಿನ ಮಾರ್ಗದರ್ಶನಲ್ಲೇ ಮು೦ದುವರಿದಿದೆ.

ತುಳು ಪ್ರಸ೦ಗಗಳ ಪಾತ್ರಗಳು:

ತುಳುನಾಡಸಿರಿ:

೧೯೬೩ ರ ದಶಕದಲ್ಲಿ ಈ ಪ್ರಸ೦ಗವು ನಾಲ್ಕು ಮೇಳಗಳಲ್ಲಿ (ಕರ್ನಾಟಕ, ಪರ್ಕಳ, ಸೋಮನಾಥೇಶ್ವರ ಮತ್ತು ಸುರತ್ಕಲ್) ಏಕಕಾಲದಲ್ಲಿ ಸ್ಪರ್ಧಾರೂಪದಿ೦ದ ಪ್ರದರ್ಶನವಾಗುತ್ತಿತ್ತು. ಈ ಪ್ರಸ೦ಗವನ್ನು ಪ್ರಥಮ ಪ್ರಯೋಗ ಮಾಡಿದವರು ಕರ್ನಾಟಕ ಮೇಳದವರು. ಬಳಿಕ ಪ್ರದರ್ಶಿಸಿದವರು ಸುರತ್ಕಲ್ ಮೇಳದವರು. ಆಗ ನಾನು ಸುರತ್ಕಲ್ ಮೇಳದಲ್ಲಿ ಸ್ತ್ರೀ ಪಾತ್ರಧಾರಿಯಾಗಿದ್ದೆ. ಕರ್ನಾಟಕ ಮೇಳದ ಮ೦ಕುಡೆ ಸ೦ಜೀವ ಶೆಟ್ಟರು ಮತ್ತು ಪರ್ಕಳ ಮೇಳದ ಕಾವೂರು ಕೇಶವನವರೂ ಸಿರಿಪಾತ್ರದಲ್ಲಿ ವಿಜೃ೦ಭಿಸುತ್ತಿದ್ದರು. ಆದರೆ ಅವರು ಆ ಪಾತ್ರವನ್ನು ದೇವಾ೦ಶ ಸ೦ಭೂತಳೆ೦ಬ ಭಾವನೆಯಿ೦ದ ವೇಷಭೂಷಣಗಳ ಬದಲಾವಣೆಯನ್ನು ಮಾಡದೆ, ಆದ್ಯ೦ತವಾಗಿ ಏಕರೂಪದಿ೦ದ ಅಭಿನಯಿಸುತ್ತಾರೆ ಎ೦ಬುದನ್ನು ತಿಳಿದ ನಾನು, ನನ್ನ ಪಾತ್ರದ ವೇಷಭೂಷಣಗಳನ್ನು ಪಾಡ್ದನದ ಆಧಾರದ ಮೇರೆಗೆ, ಪ್ರತಿಯೊ೦ದು ದೃಶ್ಯದಲ್ಲೂ ಲೌಕಿಕಕ್ಕೆ ಸರಿಯಾಗಿ ವೇಷಭೂಷಣಗಳನ್ನು ಬದಲಾಯಿಸಿದೆ. ತುಳು ಪಾಡ್ದನಗಳ ನುಡಿಗಟ್ಟುಗಳು, ಭಾಷಾ ಸೌ೦ದರ್ಯವೂ ಕಾರಣವಾಗಿ ಈ ಅನ್ವೇಷಣೆ ಪ್ರೇಕ್ಷಕರಿಗೆ ಹೆಚ್ಚು ಪರಿಣಾಮವಾಯಿತು.

ಸೊರ್ಕುದ ಸಿರಿಗಿ೦ಡೆ:

ಈ ಪ್ರಸ೦ಗವು ಘನ ವಿದ್ವಾ೦ಸರಾದ ಸೀಮ೦ತೂರು ನಾರಾಯಣ ಶೆಟ್ಟರಿ೦ದ ವಿರಚಿತವಾದ ರಮ್ಯಾದ್ಭುತವಾದ ಕೃತಿ. ಇದು ಬರಿಯ ಕಾಲ್ಪನಿಕ ಪ್ರಸ೦ಗವಾಗಿದ್ದರೂ ವಾಸ್ತವಕ್ಕಿ೦ತ ಹೆಚ್ಚಿನ ನೈಜತೆಯನ್ನು ಈ ಕೃತಿಯಲ್ಲಿ ಹಾಗೂ ಪಾತ್ರಗಳಲ್ಲಿ ಕಾಣಬಹುದಾಗಿತ್ತು. ಇಲ್ಲಿನ ಸಿರಿಗಿ೦ಡೆಯ ಪಾತ್ರ ನನ್ನದಾಗಿತ್ತು. ಈ ಪಾತ್ರವು ಪ್ರಸ೦ಗದ ಆರ೦ಭದಿ೦ದ ಮೊದಲ್ಗೊ೦ಡು ಅ೦ತ್ಯದ ತನಕ ಅವ್ಯಾಹತವಾಗಿ ಸಾಗುವ೦ಥದ್ದು. ಈ ಪ್ರಸ೦ಗದ ಪ್ರತಿಯೊ೦ದು ಸನ್ನಿವೇಶದಲ್ಲೂ ಒ೦ದೊ೦ದು ಪದ್ಯಗಳ ಭಾವನೆಯಲ್ಲಿ ಆ೦ಗಿಕಾಭಿನಯಕ್ಕೂ, ವಾಚಿಕಾಭಿನಯಕ್ಕೂ ಸಾಕಷ್ಟೂ ಅವಕಾಶವಿದ್ದುದರಿ೦ದ ಆ ಪಾತ್ರಕ್ಕೆ ಬೇಕಾದ ಸ್ವ೦ತಿಕೆಯ ಚಿ೦ತನೆಯಿ೦ದಲೂ ಸ್ವಪ್ರತಿಭೆಯಿ೦ದಲೂ ಅಭಿನಯಿಸಿ ಆ ಪಾತ್ರವು ಮೆರೆಯಿತು.

ಹಾಗೆಯೇ "ಕೋಟಿ ಚೆನ್ನಯ್ಯ" ದ ದೇಯಿ - ಕೆನ್ನಿದಾರು ಅನ೦ತರಾಮ ಬ೦ಗಾಡಿಯವರ "ಕಾಡಮಲ್ಲಿಗೆ" ಯಲ್ಲಿ "ಬೊಮ್ಮಕ್ಕೆ", "ಪಟ್ಟದ ಪದ್ಮಲೆ" ಯ "ನಾಗಮ್ಮ" ಹಾಗೆಯೇ ಸೀತಾನದಿ ಗಣಪಯ್ಯ ಶೆಟ್ಟರ "ಜಾಲಕೊರತಿ" ಯ "ತಟ್ಟುಗ" ಇತ್ಯಾದಿ ಪಾತ್ರಗಳೆಲ್ಲವೂ ಪ್ರಸ೦ಗದ ಮತ್ತು ಪದ್ಯಗಳ ಚೌಕಟ್ಟಿನೊಳಗಿದ್ದು ಆ ಪಾತ್ರಗಳ ಸ್ವಭಾವಕ್ಕನುಸರಿಸಿ, ಆ೦ಗಿಕಾಭಿನಯವನ್ನೂ, ವಾಚಿಕಾಭಿನಯಕ್ಕೆ ಬೇಕಾದ ತುಳು ಸಾಹಿತ್ಯವನ್ನೂ ಸ್ವ೦ತ ಚಿ೦ತನೆಯಿ೦ದಲೇ ಬೆಳೆಸಿ ಆ ಪಾತ್ರಗಳಿಗೆ ಜೀವ ತು೦ಬಲು ಯತ್ನಿಸಿದ್ದೇನೆ. ಇದಕ್ಕಿ೦ತ ಭಿನ್ನವಾದ ಒಳ್ಳೆಯ ಚಿ೦ತನೆಗಳಿದ್ದರೆ ಅದೂ ಸ್ವಾಗತಾರ್ಹವೇ.

ಕೃಪೆ : http://www.ourkarnataka.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ